ಭಾರತ ಬಿಟ್ಟು ತೊಲಗಿ

ಭಾರತ ಸ್ವಾತಂತ್ರ್ಯ ಹೋರಾಟದ ಒಂದು ಮಜಲು. 1942 ಆಗಸ್ಟ್ 8ರಂದು ಗಾಂಧೀಜಿ ನೀಡಿದ ಕರೆಯಂತೆ ನಡೆದ ಒಂದು ಮಹಾಚಳವಳಿ. ಚಲೇಜಾವ್ ಮತ್ತು ಕ್ವಿಟ್ ಇಂಡಿಯಾ ಎಂತಲೂ ಈ ಚಳವಳಿ ಪ್ರಸಿದ್ಧ.

	ಎರಡನೆಯ ಮಹಾಯುದ್ದ ಆರಂಭವಾದಾಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಪ್ರಾಂತಗಳ ಸರ್ಕಾರಗಳು ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಕರೆ ನೀಡಿತು. ಆದರೆ ಯುದ್ಧದಲ್ಲಿ ಜರ್ಮನಿಯದೆ ಮೇಲುಗೈ ಆದಾಗ ದೇಶಹಿತ ದೃಷ್ಟಿಯಿಂದ ತಾತ್ಕಾಲಿಕ ರಾಷ್ಟ್ರೀಯ ಸರ್ಕಾರವನ್ನು ಕೇಂದ್ರದಲ್ಲಿ ಸ್ಥಾಪಿಸಿದರೆ ತಾವು ಸರ್ಕಾರದೊಡನೆ ಸಹಕರಿಸುವುದಾಗಿ ಕಾಂಗ್ರೆಸ್ ಪ್ರಕಟಿಸಿತು. ಇದನ್ನು ಒಪ್ಪದ ಸರ್ಕಾರ ಯುದ್ಧಸಲಹಾ ಮಂಡಲಿಯ ಸ್ಥಾಪನೆ, ವೈಸರಾಯ್ ಸಲಹಾ ಮಂಡಲಿಯ ವಿಸ್ತರಣೆ, ಈ ಎರಡೂ ಮಂಡಲಿಗಳಲ್ಲಿ ಭಾರತೀಯರ ನೇಮಕ, ಹೊಸ ಸಂವಿಧಾನ ರಚಿಸಲು ಪ್ರಾತಿನಿಧಿಕ ಸಭೆಯೊಂದರ ರಚನೆ ಮುಂತಾದ 1940 ಆಗಸ್ಟ್ ತಿಂಗಳ ಕೊಡುಗೆಯನ್ನು ಮುಂದೊಡ್ಡಿತು. ಇದನ್ನು ಕಾಂಗ್ರೆಸ್ಸು ತಿರಸ್ಕರಿಸಿ ಸತ್ಯಾಗ್ರಹಹೂಡಿತು. ಮುಂದೆ 1942 ಮಾರ್ಚ್‍ನಲ್ಲಿ ರಂಗೂನ್ ಜಪಾನಿನ ವಶವಾದಾಗ ಬ್ರಿಟಿಷ್ ಸರ್ಕಾರ ಹೆದರಿ ಕ್ರಿಪ್ಸ್ ರಾಯಭಾರಕ್ಕೆ ಏರ್ಪಾಡುಮಾಡಿತು. ಕಾಂಗ್ರೆಸ್ ಇದನ್ನು ತಿರಸ್ಕರಿಸಿತು. 1942ರ ಆಗಸ್ಟ್ 8ಕ್ಕೆ ಮುಂಬೈಯಲ್ಲಿ ಸೇರಿದ ಎ ಐ ಸಿ ಸಿ ಯು `ಭಾರತಬಿಟ್ಟುತೊಲಗಿ ಚಳವಳಿಗೆ ಕರೆನೀಡಿತು. ನಾಯಕರ ಬಂಧನವಾದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ತಾನೇ ನಾಯಕನೆಂದು ಭಾವಿಸಿ, ಬ್ರಿಟಿಷ್ ಸರ್ಕಾರದ ಅಸ್ತಿತ್ವದ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆ ತೋರಬೇಕೆಂದು ಗಾಂಧೀಜಿ ಕರೆಕೊಟ್ಟರು ಅದೇದಿನ ರಾತ್ರಿ ಗಾಂಧೀಜಿ, ನೆಹರೂ, ಆಜಾದ್ ಮತ್ತು ಇತರ ನಾಯಕರ ಬಂಧನವಾಯಿತು. ಗಾಂಧೀಜಿ ಮತ್ತು ಕಾಂಗ್ರೆಸ್ ನಾಯಕರ ಬಂಧನದ ವಿರುದ್ಧ ಉಗ್ರಪ್ರತಿಭಟನೆ ಮುಂಬೈಯಿಂದ ಆರಂಭಿಸಿ ಎಲ್ಲಕಡೆಗೂ ಹರಡಿತು. ಸಿಟ್ಟಿದ್ದ ಜನ ಕಲ್ಲೆಸೆತ, ಕಟ್ಟಡಗಳಿಗೆ ಅಗ್ನಿಸ್ಪರ್ಶ, ಪೊಲೀಸರನ್ನೂ ಪೊಲೀಸ್ ವಾಹನಗಳನ್ನೂ ಆಕ್ರಮಿಸುವ_ಹೀಗೆ ವಿವಿಧರೂಪದ ಪ್ರತಿಭಟನೆ ತೋರಿತು. ಶಾಲಾ ಕಾಲೇಜುಗಳು ಹಾಗೂ ಕಾರ್ಖಾನೆಗಳು ಮುಚ್ಚಿ ಮುಷ್ಕರದಲ್ಲಿ ಭಾಗವಹಿಸಿದರು. ಮಶ್ರುವಾಲಾ ಮತ್ತು ಕಾಲೆಲ್ಕರ್ ಅವರು `ಹರಿಜನದಲ್ಲಿ ಚಳವಳಿಯನ್ನು ನಡೆಸುವ ವಿಧಾನವನ್ನು ಪ್ರಕಟಿಸಿ ಜನರಿಗೆ ಮಾರ್ಗದರ್ಶನ ಮಾಡಿದರು. ಸರ್ಕಾರೀ ಯಂತ್ರ ನಡೆಯದಂತೆ ಹಾಗೂ ಬ್ರಿಟಿಷರ ಯುದ್ಧ ಪ್ರಯತ್ನಗಳಿಗೆ ಸಹಕಾರ ಸಿಗದಂತೆ ಮಾಡಲು ಜೀವಹಾನಿಯಾಗದಂತೆ ರೈಲುಹಳಿ ಕೀಳುವುದು, ತಂತಿ ಕತ್ತರಿಸುವುದು ಸರ್ಕಾರೀ ಕಟ್ಟಡಗಳಿಗೆ ಹಾನಿಮಾಡುವುದು ಹೀಗೆ ವಿವಿಧ ಸ್ವರೂಪದ ಬುಡಮೇಲು ಕೃತ್ಯಗಳನ್ನು ಭೂಗತ ಗುಂಪುಗಳು ಆರಂಭಿಸಿದುವು. ಬಿಹಾರ, ಉತ್ತರ ಪ್ರದೇಶ, ಮುಂಬಯಿ ಪ್ರಾಂತಗಳಲ್ಲಿ ಬಿರುಸಾಗಿ ಚಳವಳಿ ನಡೆಯಿತು. ಮುಂಬಯಿ ಮೈಸೂರುಗಳಲ್ಲಿ ಈ ಚಳವಳಿಯಿಂದಾಗಿ ಹಲವು ತಿಂಗಳು ಶಾಲಾಕಾಲೇಜುಗಳು ಮುಚ್ಚಿದ್ದರೆ ಅಹ್ಮದಾಬಾದ್‍ನ ಗಿರಣಿಗಳು ಹಲವಾರು ತಿಂಗಳು ಮುಚ್ಚಿದ್ದವು. ಕಾರ್ಮಿಕ ಸಂಘಗಳ ಮೇಲೆ ನಿಯಂತ್ರಣ ಹೊಂದಿದ್ದ ಕಮ್ಯುನಿಷ್ಟರು ಸರ್ಕಾರದ ಪರವಾಗಿದ್ದರೂ ಮುಂಬಯಿಯಲ್ಲಿ ಸಾವಿರಾರು ಕಾರ್ಮಿಕರು ಹಲವು ವಾರ ಮುಷ್ಕರ ಆಚರಿಸಿದರು. ಬೇರೆಬೇರೆ ಕಡೆ ಸ್ಛೋಟಗಳ ಬಳಕೆಯೂ ಆಯಿತು. ಮುಂಬಯಿಯ ಮಜಗಾಂವ್ ಬಂದರಿನಲ್ಲಿ ಅಕ್ಟೋಬರ್ 3ರಂದು ಭಾರಿ ಸ್ಫೋಟವಾಯಿತು. ಪುಣೆ ಸಿನಿಮಾಮಂದಿರದ ಸ್ಛೋಟದಿಂದ ಐವರು ಬಿಳಿಯರು ಸತ್ತರು. ವಿವಿಧ ಕಡೆ ಪೊಲೀಸರು ಗಲಭೆ ತಡೆಯಲು ಸೇನೆ ಕರೆಸಲಾಯಿತು. ಈ ಸಂದರ್ಭದಲ್ಲಿ ನಡೆದ ಗೋಲೀಬಾರಿನಲ್ಲಿ ದೆಹಲಿಯಲ್ಲಿ 150 ಜನ, ಉತ್ತರ ಪ್ರದೇಶದ ಬಾಲ್ಲಿಯಾದಲ್ಲಿ 167 ಜನ. ಮಧುಬನ್‍ನಲ್ಲಿ 34 ಜನ, ಅಸ್ಸಾಮಿನ ಗೋಲ್‍ಪಾಡಾದಲ್ಲಿ 60 ಜನ ಸತ್ತರು. ಪಟ್ನಾ ಅಸೆಂಬ್ಲಿಹಾಲ್ ಮೇಲೆ ಆಗಸ್ಟ್ 11ರಂದು ಧ್ವಜ ಹಾರಿಸಿದಾಗ ಆರು ಜನ ಸತ್ತರು. ಜೈಲಿಗೆ ಒಯ್ದ ನಾಯಕರ ಬಗ್ಗೆ ವಿವರಣೆ ನೀಡದಿದ್ದರಿಂದಲೂ ಪತ್ರಿಕೆಗಳ ಮೇಲೆ ನಿರ್ಬಂಧ ಹೇರಿದ್ದರಿಂದಲೂ ಆಗಸ್ಟ್ 15ಕ್ಕೆ ಜೈಲಿನಲ್ಲಿ ಮಹಾದೇವ ದೇಸಾಯಿ ತೀರಿಕೊಂಡಾಗ ಅವರನ್ನೂ ಇತರ ನಾಯಕರನ್ನೂ ಗುಂಡಿಕ್ಕಿ ಕೊಲ್ಲಲಾಯಿತೆಂಬ ವದಂತಿಹರಡಿ ಆಗಸ್ಟ್ 16, 17ರಂದು ಎಲ್ಲೆಡೆ ಮತ್ತೆ ಮೆರವಣಿಗೆ, ಹಿಂಸಾಚಾರ ನಡೆದುವು. ಬೆಂಗಳೂರಲ್ಲೇ ಆಗ 5ರಿಂದ 10 ಮಂದಿ ಮಡಿದರೆನ್ನಲಾಗಿದೆ. ಬೆಂಗಳೂರಿನ ವಿಮಾನ ಕಾರ್ಖಾನೆಯ ಆದಿಯಾಗಿ ಸಾವಿರಾರು ಕಾರ್ಮಿಕರು ಮುಷ್ಕರ ಹೂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರು ಮುಂಬಯಿಯಿಂದ ಗುಪ್ತ ಆಕಾಶವಾಣಿ ಪ್ರಸಾರವನ್ನೂ ಆರಂಭಿಸಿದರು.

	ಬಂಧನದಲ್ಲಿದ್ದ ಜಯಪ್ರಕಾಶ ನಾರಾಯಣರು ನವೆಂಬರ್ 11ರ ರಾತ್ರಿ ಹಜಾರಿಬಾಣ್ ಜೈಲಿನಿಂದ ಪಾರಾಗಿ ಒಂದು ಕೇಂದ್ರ ಗುಪ್ತ ಸಂಘಟನೆಯನ್ನು ರೂಢಿಸಿ ಭೂಗತ ಚಳವಳಿಗೆ ಮಾರ್ಗದರ್ಶನ ಮಾಡಿದರು. ಅಚ್ಯುತ್ ಪಟವರ್ಧನ್, ಅರುಣಾ ಅಸಫ್‍ಆಲಿ, ರಾಮ ಮನೋಹರ ಲೋಹಿಯಾ, ರಂಗರಾವ್ ದಿವಾಕರ್ ಮುಂತಾದವರು ಈ ಗುಪ್ತ ಸಂಘಟನೆ ಮಾರ್ಗದರ್ಶನ ಮಾಡುತ್ತಿದ್ದರು. ಮುಂಬಯಿ ಇದರ ಕೇಂದ್ರವಾಗಿತ್ತು. ದೇಶದ ಎಲ್ಲೆಡೆ ಹಾಗೂ ಮೈಸೂರು ಸಂಸ್ಥಾನದಲ್ಲಿ ಮತ್ತು ಇತರ ಆಶ್ರಿತರಾಜರ ಸಂಸ್ಥಾನಗಳಲ್ಲೂ ಉಗ್ರವಾಗಿ ಸಾಗಿತು. ಮಧ್ಯಪ್ರಾಂತದ ಅಷ್ಟಿ, ಚಿಮೂರ್‍ಗಳಂತೆ ಮೈಸೂರಿನ ಈಸೂರಿನಲ್ಲೂ, ಪೊಲೀಸರ ಮೇಲೆ ರೊಚ್ಚಿಗೆದ್ದ ಜನ ಆಕ್ರಮಣ ಮಾಡಿದರು. ಈಸೂರ ಐವರು ದೇಶಭಕ್ತರಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ರೈಲುಗಳ ಸಂಚಾರಕ್ಕೆ ತೀವ್ರ ತಡೆಯಾಯಿತು. ಮದ್ರಾಸಿನ ರೈಲು ಕಾರ್ಮಿಕರ ಮುಷ್ಕರದಿಂದ ಮದ್ರಾಸು,_ಕಲ್ಕತ್ತಾ ರೈಲು ಸಂಚಾರ ಸ್ಥಗಿತವಾಯಿತು. ಬೆಂಗಳೂರು-ಗುಂತಕಲ್ ಮಾರ್ಗದಲ್ಲಿ ರೈಲುಹಳಿಗಳ ವಿಧ್ವಂಸದಿಂದ ಹಲವು ದಿನ ರೈಲು ಸಂಚಾರವೇ ನಿಂತಿತು. ಗುಜರಾತಿನ ಬಾರ್ದೋಲಿ ರೈಲುಹಾದಿಯ ವಿಧ್ವಂಸದಿಂದ ಖ್ಯಾತವಾಯಿತು. ವಾಯವ್ಯಗಡಿ ಪ್ರಾಂತದಲ್ಲಿ ಅಹಿಂಸಾತ್ಮಕ ಚಳವಳಿ ನಡೆದು 2,500 ಜನ ಜೈಲುಕಂಡರು. ಕರ್ನಾಟಕದ ಬೆಳಗಾಂವಿ ಧಾರವಾಡ ಜಿಲ್ಲೆಗಳಲ್ಲಿ ಹತ್ತಾರು ತಂಡಗಳು ಭೂಗತವಾಗಿ ಸತತವಾಗಿ ಒಂದು ವರ್ಷಕ್ಕೂ ದೀರ್ಘಕಾಲ ರೈಲುಹಳಿ ಕೀಳುವುದು, ಗ್ರಾಮಚಾವಡಿ ವತ್ತು ಗ್ರಾಮದಫ್ತರ್ ಸುಡುವುದು ಮುಂತಾದ ಚಟುವಟಿಕೆಗಳನ್ನು ನಡೆಸಿ (ಕರ್ನಾಟಕ ಪ್ಯಾಟರ್ನ್) ಕರ್ನಾಟಕ ಮಾದರಿಯ ಚಳವಳಿ ಎಂದು ಖ್ಯಾತವಾದ ಯಶಸ್ವಿ ಭೂಗತ ಚಳವಳಿಯನ್ನು ನಡೆಸಿ ಜಯಪ್ರಕಾಶರಂಥ ನಾಯಕರ ಮೆಚ್ಚುಗೆಗೆ ಪಾತ್ರರಾದರು. ಈ ಎರಡೂ ಜಿಲ್ಲೆಗಳಿಗೆ ಬಿಳಿಯರೆ ಇದ್ದ ಸೈನ್ಯ ತಂದರು. ಭಾರತ ವಿದೇಶಿಯರ ದಾಳಿಯ ತೀವ್ರಭೀತಿಯಲ್ಲಿ ಇದ್ದಾಗ ಈ ಚಳವಳಿ ಬ್ರಿಟಿಷರ ಯುದ್ಧಯತ್ನಗಳನ್ನು ತೀವ್ರವಾಗಿ ಕುಂಠಿತಗೊಳಿಸಿತು. ಆಕ್ರಮಣಭಯಕ್ಕೆ ಒಳಗಾದ ಪೂರ್ವ ಭಾರತದ ಜೊತೆ ಸಂಪರ್ಕಸಾಧನ ನಾಶಗೊಳಿಸುವುದರ ಜೊತೆ ಸೇನೆಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆಗೂ ಈ ಚಳವಳಿ ತಡೆಯನ್ನೊಡ್ಡಿತು ಮತ್ತು ಉತ್ಪನ್ನದಲ್ಲಿ ಶೇಕಡಾ 45, ಚರ್ಮದ ವಸ್ತುಗಳಲ್ಲಿ ಶೇಕಡಾ 50 ಕಡಿಮೆ ಆಯಿತು ಎಂದು ಹಚಿನ್ಸ್, ಖಾಕಿ ಹೇಳಿದ್ದಾರೆ.

	ಭಾರತ ಸರ್ಕಾರದ ಅಂಕೆಸಂಖ್ಯೆಗಳಂತೆ 1943 ಡಿಸೆಂಬರ್ ತನಕ ಭಾರತದ ಬ್ರಿಟಿಷ್ ಪ್ರಾಂತಗಳಲ್ಲಿ ಮಾತ್ರ 91.836 ಜನರನ್ನು ಬಂಧಿಸಲಾಯಿತು. 601 ಬಾರಿ ಗೋಲಿಬಾರಾಯಿತು. 763 ಜನ ಸತ್ತರು. ಇದರಲ್ಲಿ ಸಂಸ್ಥಾನಗಳಲ್ಲಿಯ ಅಂಕೆ ಸಂಖ್ಯೆಗಳು ಸೇರಿಲ್ಲ. ಆಗಿನ ಮೈಸೂರು ಸಂಸ್ಥಾನ ಒಂದರಲ್ಲೆ 5000ಕ್ಕೂ ಹೆಚ್ಚು ಬಂಧನಗಳೂ 25ಕ್ಕೂ ಹೆಚ್ಚು ಸಾವುಗಳಾದವು. ಹೀಗಿರುವಾಗ ಮೇಲೆ ಕೊಟ್ಟ ಅಂಕೆ ಸಂಖ್ಯೆಯ ಅಸಮರ್ಪಕತೆ ಸ್ಪಷ್ಟವಾಗುತ್ತದೆ. ದೇಶಾದ್ಯಂತ ಜ್ವಾಲಾಮುಖಿಯಂತೆ ಸ್ಛೋಟಿಸಿದ ಈ ಚಳವಳಿ ಸುಮಾರು ಎರಡು ವರ್ಷಗಳವರೆಗೆ ಸಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ (ನೋಡಿ- ಭಾರತದ ಸ್ವಾತಂತ್ರ್ಯ ಸಂಗ್ರಾಮ ) ಒಂದು ಮೈಲಿಗಲ್ಲಾಯಿತು. ಹಾಗೂ ಈ ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳವುದು ಕಷ್ಟಸಾಧ್ಯವೆಂಬ ಸಂಗತಿಯನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟಿತು.								
	(ಎಸ್.ಎನ್.ಕೆಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ